ರಾಜ್‍ಮಹಲ್ ಶಿಲಾಶ್ರೇಣಿಗಳು- ಗೊಂಡ್ವಾನಯುಗದ ಉತ್ತರಾರ್ಧದಲ್ಲಿ ಸಂಚಯನಗೊಂಡ ಒಂದು ಮುಖ್ಯ ವಿಭಾಗ. ಭಾರತದ ಪಶ್ಚಿಮ ಬಂಗಾಲ ಮತ್ತು ಬಿಹಾರ್ ಪ್ರಾಂತ್ಯಗಳಲ್ಲಿಯ ಬೆಟ್ಟಗಳಲ್ಲಿ ಈ ಶ್ರೇಣಿಗಳು ಚೆನ್ನಾಗಿ ಹೊರಕಾಣುವುದರಿಂದ ಇವನ್ನು ರಾಜ್‍ಮಹಲ್ ಶ್ರೇಣಿಗಳೆಂದು ಕರೆಯಲಾಗಿದೆ. ಇವು ಗೊಂಡ್ವಾನ ಶಿಲಾಸಮುದಾಯದ ಉತ್ತರಾರ್ಧಕ್ಕೆ  ಸೇರಿದ ಮಹದೇವ ಶಿಲಾಶ್ರೇಣಿ ಮತ್ತು ಜಬ್ಬಲ್‍ಪುರ್ ಶಿಲಾ ಶ್ರೇಣಿಗಳ ನಡುವಣ ಕಾಲದವೆಂದು ತಿಳಿದುಬಂದಿದೆ. 

ರಾಜ್‍ಮಹಲ್ ಶಿಲಾ ಶ್ರೇಣಿಗಳನ್ನು ಎರಡು ಹಂತಗಳನ್ನಾಗಿ ವಿಂಗಡಿಸಲಾಗಿದೆ. ರಾಜ್‍ಮಹಲ್ ಹಂತ ಮತ್ತು ಕೋಟಾ ಹಂತ. ಕೆಳಗಣ ರಾಜ್‍ಮಹಲ್ ಹಂತದ ಸ್ತರಗಳ ದಪ್ಪ ಸುಮಾರು 600 ಮೀ. ಇವು ರಾಜ್‍ಮಹಲ್ ಟ್ರ್ಯಾಪ್‍ಶಿಲೆಗಳನ್ನೂ ಅವುಗಳೊಡನೆ ಅಂತರಪದರಗಳಾಗಿ ಜೇಡು ಶಿಲೆಗಳನ್ನೂ ಒಳಗೊಂಡಿವೆ. ಸಸ್ಯಾವಶೇಷಗಳನ್ನು ಒಳಗೊಂಡ ಈ ಅಂತರಪದರಗಳು ಒಂದೊಂದೂ 2-6 ಮೀಗಳಷ್ಟು ದಪ್ಪ ಇವೆ.  ಟ್ರ್ಯಾಪ್‍ಶಿಲೆಗಳ  ಮಧ್ಯದಲ್ಲಿ ಸಸ್ಯಾವಶೇಷಗಳನ್ನು  ಒಳಗೊಂಡ ಸ್ತರಗಳು ಕಂಡುಬರುವುದರಿಂದ  ಎರಡು ಟ್ರ್ಯಾಪ್ ಶಿಲಾಸ್ರಾವಗಳ ನಡುವಣ ಕಾಲದಲ್ಲಿ ಈ ಸ್ತರಗಳು ಶೇಖರವಾಗಿವೆಯೆಂದು ಭಾವಿಸಲಾಗಿದೆ.  ಸಾಮಾನ್ಯವಾಗಿ ಇವುಗಳಲ್ಲಿಯ ಜೇಡುಶಿಲೆಗಳು ಸಿಲಿಕಯುಕ್ತವಾಗಿವೆ. ಈ ಪದರಗಳಲ್ಲಿ ವಿವಿಧ ವರ್ಗಕ್ಕೆ ಸೇರಿದ ಸಸ್ಯಾವಶೇಷಗಳು ಹೇರಳವಾಗಿ ಕಂಡುಬಂದಿವೆ. ಅವುಗಳಲ್ಲಿ ಸೈಕಾಡ್ ವರ್ಗ ಅಧಿಕ. ಫರ್ನ್, ಕೋನಿಫೆರಸ್ ಮುಂತಾದವೂ ವಿಶೇಷವಾಗಿವೆ. ಟೈಲೊಫಿಲಮ್ ಡಿಕ್ಟಿಯೋಜಮೈಟಿಸ್, ವಿಲಿಯಮ್‍ಸೋನಿಯ, ಕ್ಲ್ಯಾಡೋಫ್ಲೆಬಿಸ್, ಎಲ್ಯಾಟೊಕ್ಲಾಡಸ್ ಮುಂತಾದ ಜಾತಿಗಳಿಗೆ ಸೇರಿದ ಸಸ್ಯಾವಶೇಷಗಳನ್ನೂ (ಪೆಟ್ರಿಫೈಡ್‍ವುಡ್) ಈ ಪದರಗಳಲ್ಲಿ ಕಾಣಬಹುದು. 

ಮೇಲಣ ಕೋಟಾ ಹಂತ ಸು. 700 ಮೀಗಳಷ್ಟು ದಪ್ಪ ಇದೆ. ಇದು ಆಂಧ್ರ ಪ್ರದೇಶದ ಕೋಟಾ ಸಮೀಪದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಈ ವಿಭಾಗದಲ್ಲೂ ಅನೇಕ ಸಸ್ಯಾವಶೇಷಗಳೂ ಇತರ ಜೀವ್ಯವಶೇಷಗಳೂ ಕಂಡುಬಂದಿವೆ. ರಾಜ್‍ಮಹಲ್ ಶಿಲಾಶ್ರೇಣಿಯು ಭೂಕಾಲ ಸೂಚಿಯ ಜುರಾಸಿಕ್ ಯುಗಕ್ಕೆ  ಸೇರಿದ್ದೆಂದು ಸಸ್ಯಾವಶೇಷಗಳ ಆಧಾರದ ಮೇಲೆ ನಿರ್ಧರಿಸಲಾಗಿದೆ. 
(ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ